ಪೋರ್ಚುಗೀಸ್ ಸಾಹಿತ್ಯ -
ಪೋರ್ಚುಗಲ್ ಮತ್ತು ಸ್ಪೇನ್ ಐಬೀರಿಯನ್ ಪರ್ಯಾಯ ದ್ವೀಪದ ಎರಡು ರಾಷ್ಟ್ರಗಳು. ಎರಡಕ್ಕೂ ಪರಸ್ಪರ ನಿಕಟ ಸಂಬಂಧವುಂಟು. ಅನೇಕ ಲೇಖಕರು ಎರಡೂ ಭಾಷೆಗಳಲ್ಲಿ ಗ್ರಂಥ ರಚನೆ ಮಾಡಿರುವುದರಿಂದ ಈ ಲೇಖನಕ್ಕೆ ಪೂರಕವಾಗಿ ನೋಡಿ ಸ್ಪ್ಯಾನಿಷ್ ಸಾಹಿತ್ಯ.

ಮಧ್ಯಯುಗ : ಪೋರ್ಚುಗಲ್ 12ನೆಯ ಶತಮಾನದಲ್ಲಿ ಮೂರ್ಸ್ ದೊರೆಗಳ ಹಿಡಿತದಿಂದ ತಪ್ಪಿಸಿಕೊಂಡು ಸ್ವತಂತ್ರ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದು ಎಲ್ಲ ಕ್ಷೇತ್ರದಲ್ಲೂ ತನ್ನತನವನ್ನು ಬೆಳೆಸಿಕೊಳ್ಳಲಾರಂಭಿಸಿತು. ಪೋರ್ಚುಗೀಸರಿಗೂ ಗಲೀಷೀಯನ್ನರಿಗೂ ಭಾಷಾ ಪ್ರಭೇದ, ಮನೋಧರ್ಮ ಇವುಗಳಲ್ಲಿ ಇಂದಿಗೂ ಹೊಂದಾಣಿಕೆ ಇರುವುದನ್ನು ಕಾಣಬಹುದಾಗಿದೆ. ಆದುದರಿಂದ ಮಧ್ಯಯುಗದ ಪೋರ್ಚುಗೀಸ್ ಸಾಹಿತ್ಯದಲ್ಲಿ ಗಲೀಷಿಯನ್ ಭಾಷೆಯಲ್ಲಿ ರಚಿತವಾದ, ಉತ್ತಮವಾದ ಸ್ಥಳೀಯ ಜಾನಪದ ಕಾವ್ಯವನ್ನು ಕಾಣಬಹುದು. ಇದು ಪ್ರೊವಾನ್ ಕಾವ್ಯ ಪ್ರವಾಹದ ಸಂಪರ್ಕ ಮತ್ತು ಪ್ರಭಾವದಲ್ಲಿ ರೂಪಾಂತರ ಹೊಂದಿರುವುದು ಸಾಧ್ಯ. ಕಾಂಟೀಗದೆ ಆಮಿಗೊ ಎಂಬುದು ನಮಗೆ ದೊರೆತಿರುವ ಸುಂದರ ಕಾವ್ಯರಾಶಿ. ಬಹುತೇಕ ಹೆಂಗಸರು ಹಾಡುವ ಹಾಡುಗಳು ಇದರಲ್ಲಿವೆ. ಸ್ವರೂಪದಲ್ಲಿ ಈ ಕವನಗಳನ್ನು ಕ್ರಿಸ್ತಪೂರ್ವದಲ್ಲಿ ರೈತವರ್ಗದವರು ನೃತ್ಯಗಳಲ್ಲಿ ಹಾಡುತ್ತಿದ್ದ ಅಥವಾ ಪ್ರಕೃತಿಯ ಆರಾಧನೆ ಮತ್ತು ಮಂತ್ರ-ತಂತ್ರಗಳಲ್ಲಿ ಬಳಸುತ್ತಿದ್ದ ಕವನಗಳ ಪ್ರತಿರೂಪವೇ ಆಗಿದ್ದು, ಮಧ್ಯಯುಗದಲ್ಲಿ ಕ್ರೈಸ್ತರ ಯಾತ್ರಾ ಸ್ಥಳಗಳಲ್ಲಿ, ಹಬ್ಬಗಳಲ್ಲಿ ಉತ್ಸವಗಳಲ್ಲಿ ಹಾಡಲು ಅಳವಡಿಸಲ್ಪಟ್ಟವು. ಪ್ರೊವಾನ್ ಜಾನಪದ ಕವನಗಳ ರಚನಾ ಕೌಶಲ್ಯ ಮತ್ತು ವೈವಿಧ್ಯಗಳ ಪ್ರಭಾವದಲ್ಲಿ ಪೋರ್ಚುಗೀಸ್ ಗಲೀಷಿಯಸ್ ಜಾಂಗ್ಲರ್ ಕವಿಗಳು ಇದನ್ನು ವಿಶೇಷವಾಗಿ ಬೆಳೆಸಿದರು. ಈ ಬಗೆಯ ಕವನಗಳಲ್ಲಿ ಕೋಸೊಂಟೆ ಎಂಬ ಪದ್ಯಜಾತಿ ವಿಶಿಷ್ಟವಾದುದು. ಇದರಲ್ಲಿ ಎರಡು ಚರಣದ ಶ್ಲೋಕಗಳು, ಮೂರನೆಯ ಚರಣ ಪಲ್ಲವಿಯಂತೆ ಪುನರುಕ್ತವಾಗುವುದು. ಇದರಲ್ಲಿನ ಬಹುತೇಕ ಗೀತೆಗಳು ಯುದ್ಧಭೂಮಿಗೆ ಹೋದ ಪತಿಯನ್ನು ಸ್ಮರಿಸಿ ಹಂಬಲಿಸುವುದು ಅಥವಾ ಬೆಳಗಿನಲ್ಲಿ ಪಕ್ಷಿಗಳು ಹಾಡುವುದು. ಯುವತಿ ಸಮುದ್ರ ದಂಡೆಯ ಮೇಲೆ ಇನಿಯನಿಗಾಗಿ ಕಾದಿರುವುದು ಅಥವಾ ಅಲ್ಲಿ ಸ್ನಾನ ಮಾಡುವುದು ಅಥವಾ ದೋಣಿಯಲ್ಲಿ ಹೋಗುವುದು. ಜಿಂಕೆ ನೀರು ಕುಡಿಯಲು ಹೊಳೆಗೆ ಬರುವುದು-ಇತ್ಯಾದಿ ಸನ್ನಿವೇಶಗಳನ್ನು ನಿರೂಪಿಸುವುವು. ಈ ಹಾಡುಗಳಲ್ಲಿ ರೈತಾಪಿ ಜನರ ಜೀವನ ನೈಜವಾಗಿ ಚಿತ್ರಿತವಾಗಿದೆ.

ಇದೇ ಕಾಲದ ಪೋರ್ಚುಗೀಸ್ ಕೃತಿಗಳಲ್ಲಿ ಆಲ್‍ಫೇನ್ಸೊ ಎಲ್ ಸಾವೀಯೊ ದೊರೆಯ ಭಾವಗೀತೆಗಳು, ಮೂರನೆಯ ಆಲ್‍ಫೇನ್ಸೊ (1248) ದೊರೆಯ ಕಾಲದಲ್ಲಿ ರಚಿತವಾದ ಭಾವಗೀತೆಗಳ ಸಂಕಲನವಾದ ಕೋನ್ಷಿಯನೇರೊದೆ ಅಹುದ, ಡಿನಿಸ್ ದೊರೆಯ ಕಾಲದ ಆಸ್ಥಾನ ಕವಿಗಳ ಪದ್ಯಗಳು-ಇವು ಉಪಲಬ್ಧವಿದೆ. ಸಾಲಾಡೊ ಕದನದಲ್ಲಿ ಮುಸ್ಲಿಮರ ಮೇಲೆ ಕ್ರೈಸ್ತರಿಗೆ ಲಭಿಸಿದ ವಿಜಯದಿಂದ ಪ್ರೇರಿತವಾದ ಆಲ್‍ಫೇನ್ಸೊ ಗಿರಾಲ್ಡೇಸ್ ಎಂಬ ಭವ್ಯ ಕಾವ್ಯದ ಸಣ್ಣ ಭಾಗಗಳು ದೊರೆತಿವೆ. ಚಾರಿತ್ರಿಕ ಲೇಖನಗಳು, ಸಂತರ ಜೀವನ ಚರಿತ್ರೆಗಳು, ರಾಜರ ವಂಶಾವಳಿಗಳು ಗದ್ಯದಲ್ಲಿವೆ. 

15ನೆಯ ಶತಮಾನ : ಒಂದನೆಯ ಜಾನ್ ಮತ್ತು ಎಡ್ವರ್ಡ್ ದೊರೆಗಳ ಕಾಲದಲ್ಲಿ ರಾಜಾಶ್ರಯ ದೊರೆತು ಚಾರಿತ್ರಿಕ ಘಟನಾವಳಿಗಳೂ , ಲ್ಯಾಟಿನ್ ಉದ್ಗ್ರಂಥಗಳ ಭಾಷಾಂತರಗಳು ರಚಿತವಾದವು. ತೆರ್‍ನ್ಯಾವೋ ಲೋಪೇಸನ ಲೇಖನದಲ್ಲಿ ದೊರೆಯ ಪ್ರಶಂಸೆಗಿಂತಲೂ ಜನತೆಯ ಚರಿತ್ರೆಯ ನಿರೂಪಣೆ ಹೆಚ್ಚಾಗಿರುವುದೊಂದು ವೈಶಿಷ್ಟ್ಯ. ಗಾರ್ತೀಯ ದೊರೆ ಸೆಂಡೆಯ ಲೇಖನದಲ್ಲಿ ವೈವಿಧ್ಯಮಯ ಸಂಗತಿಗಳೂ ಜನರ ಬೀದಿಮಾತುಗಳು ಹೇರಳವಾಗಿ ಕಾಣುತ್ತವೆ. ಪೇದ್ರೂ ದೊರೆಯ ಮಗ ಪೇದ್ರೂವಿನ ಕೃತಿಗಳಲ್ಲಿ ತನ್ನ ಸಹೋದರಿ ಈಸಾವೆಲ್ ಮೇಲಿನ ಶೋಕ ಗೀತೆಯೊಂದು ಐದನೆಯ ಆಲ್‍ಫೋನ್ಸೊ ಮತ್ತು ಎರಡನೆಯ ಜಾನ್ ದೊರೆಗಳ ಕಾಲದ ಆಸ್ಥಾನ ಕವನಗಳು ಕೋನ್ಷಿಯೋನೇರೊ ಗೇರಾಲ್ ಎಂಬ ಅಂಕಿತದಲ್ಲಿ ಗಾರ್ತೀಯ ದೊರೆ ಸೆಂಡೆಯಿಂದ ಸಂಗ್ರಹಿಸಿ 1516 ರಲ್ಲಿ ಮುದ್ರಿತಗೊಂಡಿತು. ಇದರಲ್ಲಿ ಪ್ರತಿನಿಧಿಸಲ್ಪಟ್ಟ 200 ಕವಿಗಳ ಪೈಕಿ ಚೀಲ್‍ವಿಸಾಂಟೆ ಸಾ ದೆ ಮೀರಾಂಡ ಬೆರ್‍ನಾರ್ಡಿಂ ರೀವೇಯ್ರೊ ಮುಂತಾದವರು ಪ್ರಸಿದ್ಧರು. 

16ನೆಯ ಶತಮಾನ : ಈ ಕಾಲವನ್ನು ಪೋರ್ಚುಗೀಸಿನ ನವಚೇತನ ಯುಗವೆನ್ನಬಹುದು. ಮೇಲೆ ಹೇಳಿದ ಹೆಸರುಗಳೆಲ್ಲ ಪೋರ್ಚುಗೀಸ್ ನವೋದಯಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನೇ ಸೂಚಿಸುವುವು. ನವಚೇತನ ಪೋರ್ಚುಗಲ್ಲಿಗೆ ಎರಡು ಮಾರ್ಗವಾಗಿ ಬಂದಿತು. ಅತ್ತ ನೇರವಾಗಿ ಇಟಲಿಯಿಂದ, ಇತ್ತ ಸ್ಪೇನಿನ ಮುಖಾಂತರ ಸಾಹಿತ್ಯದಲ್ಲಿ ನವೋದಯ ಪ್ರೇರಣೆಗೂ ದೇಶೀಯ ಪ್ರೇರಣೆಗೂ ಘರ್ಷಣೆ ಸಂಭವಿಸಿತು. ಒಟ್ಟಿನಲ್ಲಿ ದೇಶೀಯ ಪ್ರಾಕಾರಗಳು ಅಳಿಸಿ ಹೋಗದೆ ಹೊಸ ಪ್ರೇರಣೆಯಿಂದ ರೂಪಾಂತರ ಹೊಂದಿದುವೆನ್ನಬಹುದು. ವಾಸ್ಕೋಡಗಾಮನ ಪೌರ್ವಾತ್ಯ ಭೌಗೋಳಿಕ ಸಂಶೋಧನೆಯಿಂದಾಗಿ ಪೋರ್ಚುಗೀಸಿನ ಗೌರವ ಪ್ರಭಾವಗಳು ಹೆಚ್ಚಿದುವು. ಇದರಿಂದಾಗಿ ಸಾಹಿತ್ಯದಲ್ಲಿ ನವಚೇತನ ಧಾರಾಳವಾಗಿ ಹೊಮ್ಮಲು ಸಹಾಯಕವಾಯಿತು. 

	ನಾಟಕ ಸಾಹಿತ್ಯ : ಜಿóೀಲ್ ವಿಸಾಂಟೆಯನ್ನು (1465-1536), ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ನಾಟಕದ ಕವಿಯೆನ್ನಬಹುದು. ಈತ ಪ್ರಚಲಿತವಾಗಿದ್ದ ದೇಶಿಯ ದೃಶ್ಯಸಾಹಿತ್ಯವನ್ನು ಆಧುನಿಕ ನಾಟಕ ರೂಪಕ್ಕೆ ಪರಿವರ್ತಿಸಿದ. ಇದೆ ಮಾರ್ಗದಲ್ಲಿ ಆಲ್‍ಫೋನ್ಸೋ ಆಲ್ವಾರೇಸ್ಸ್ ಮತಿಯ ನಾಟಕಗಳನ್ನೂ ಆ್ಯಂಟಿನಿಯೋ ರೀವೇಯ್ರೊ ವಿಡಂಬನಾತ್ಮಕ ನಾಟಕಗಳನ್ನೂ ಬಾಲ್ತಸಾರ್ ಡೀಯ್ಯಾತ್ ಔಟೋಗಳನ್ನೂ ಬರೆದರು. ಜೀಲ್ ವಿಸಾಂಟೆಯ ಮರಣಾನಂತರ ಜನಪ್ರಿಯ ನಾಟಕಕ್ಕೆ ರಾಜಾಶ್ರಯ ತಪ್ಪಿತು. ಇತ್ತ ಇನ್‍ಕ್ವಿಸಿಷನ್ ಸಂಸ್ಥೆಯೂ ಅತ್ತ ಪ್ರಾಚೀನ ಸಾಹಿತ್ಯ ವಿದ್ವಾಂಸರೂ ಜಾನಪದ ನಾಟಕವನ್ನು ಖಂಡಿಸಿದರು. ಜೆಸೂಟ್ ಲೇಖಕರು ಲ್ಯಾಟಿನ್ ಮಾದರಿಯ ಕರುಣ ಹರ್ಷ ಮಿಶ್ರನಾಟಕಗಳನ್ನೂ ಕ್ರೈಸ್ತಮತೀಯ ವಸ್ತುವಿನ ಆರ್ಧಾಂತರ (ಅನ್ಯಾರ್ಥ) ನಾಟಕಗಳನ್ನೂ ಬರೆದರು. ಸಾಟಿ ಮೀರಾಂಡ (1481-1558) ಮತ್ತು ಆತನ ಅನುಯಾಯಿಗಳು ಔಟೋಗಳನ್ನು ಖಂಡಿಸಿ ಟೆರೆನ್ಸ್ ಅನುಕರಣದಲ್ಲಿ ಗದ್ಯನಾಟಕಗಳನ್ನು ಬರೆದರು. ಕೃತಕವಾಗಿ ಕಾಣಿಸಿದ ಈ ನಾಟಕಗಳು ಹೆಚ್ಚು ಕಾಲ ಬದುಕಲಿಲ್ಲ. ಆಂಟೋನಿಯೊ ಫೆರ್ರೇಯ್ರ (1528-69) ಸೆನೆಕ ಮುಂತಾದ ಲ್ಯಾಟಿನ್ ನಾಟಕಕಾರರನ್ನು ಅನುಸರಿಸದೆ ಪ್ರಾಚೀನ ಕಾಲದ ಉದ್ದಾಮ ಲೇಖಕರಾದ ಈಸ್ಕಿಲಸ್, ಸಾಫೊಕ್ಲೀಸ್, ಯುರೀಪಿಡೀಸ್, ಮುಂತಾದವರ ಅನುಕರಣೆಯಲ್ಲಿ ಕೆಲವು ಉತ್ತಮ ನಾಟಕಗಳನ್ನು ಬರೆದ. ಈನೇಸ್ ದೆ ಕಾಸ್ಟ್ರೊ ಎಂಬ ಈತನ ಉತ್ಕøಷ್ಟ ಕೃತಿಗಳು ರೂಪದಲ್ಲಿ ಗ್ರೀಕ್ ರುದ್ರನಾಟಕಗಳಾದರೂ ಪೋರ್ಚುಗೀಸ್ ಚಾರಿತ್ರಿಕ ವಸ್ತುವಿನ ಮೇಲೆ ರಚಿತವಾದವು. 

ಪದ್ಯ ಸಾಹಿತ್ಯ : ಇಟಲಿ ಸಾಹಿತ್ಯದ ಪ್ರೇರಣೆಯಲ್ಲಿ ಸಾಟಿಮೀರಾಂಡ ಮತ್ತು ಆಂಟೊನಿಯೊ ಫೆರ್ರೇಯ್ರ ಕವಿಗಳು ಸಾನೆಟ್ (ಚತುರ್ದಶಪದಿ), ಓಡ್ (ಪ್ರಗಾಥ), ಎಪಿಸಲ್ (ಪತ್ರರೂಪದ ಕವನ), ಸ್ಯಾಟಯರ್ (ವಿಡಂಬನ), ಎಕ್ಲಾಗ್ (ಗ್ರಾಮೀಣ ಕಾವ್ಯ) ಮುಂತಾದ ಪ್ರಾಕಾರಗಳಲ್ಲಿ ಕಾವ್ಯರಚನೆ ಮಾಡಿದರು. ಪೋರ್ಚುಗೀಸ್ ರೆನೆಸಾನ್ ಕಾವ್ಯದಲ್ಲಿ ಅತ್ಯಮೋಘವಾದುದು ಲೂಯಿಸ್ ದೆ ಕಾಮೋಯನ್ಸ್ ಬರೆದ ರಾಷ್ಟ್ರೀಯ ಭವ್ಯ ಕಾವ್ಯ ಲೂಸಿಯೆಡ್ಸ್ (1572). ಇದು ವಾಸ್ಕೋಡಗಾಮನ ಸಂಶೋಧನೆಯಿಂದ ಹೆಚ್ಚಿದ ಪೋರ್ಚುಗೀಸ್ ರಾಷ್ಟ್ರಪ್ರತಿಷ್ಠೆಯನ್ನು ಸಾರುವುದು. 

ಗದ್ಯ ಸಾಹಿತ್ಯ (ಚಾರಿತ್ರಿಕ); ಪೌರ್ವಾತ್ಯ ದೇಶಗಳನ್ನು ಪರ್ಯಟಿಸಿ ಪರಿಶೀಲಿಸುವುದರಲ್ಲಿ ಪೋರ್ಚುಗೀಸರು ಮೊದಲಿಗರು. ಪೌರ್ವಾತ್ಯ ಯಾನಗಳು ಮತ್ತು ಚರಿತ್ರೆಗಳನ್ನು ಕುರಿತ ಉದ್ಗ್ರಂಥಗಳು ಪೋರ್ಚುಗೀಸ್‍ನಲ್ಲಿ ಬರೆಯಲ್ಪಟ್ಟವು. ಗೋಯವೊ ದೆ ಬಾರ್ರಾಸ್‍ನ ಏಷ್ಯಾ ಗ್ರಂಥ ಸತ್ವಯುತ ಗದ್ಯಶೈಲಿಯಲ್ಲಿದ್ದು, ಪೋರ್ಚುಗೀಸ್ ಗದ್ಯ ಭಾಷೆಯನ್ನು ಸ್ಥಿಮಿತಗೊಳಿಸಿತು ಎನ್ನಬಹುದು. ಶತಮಾನದ ಅತ್ಯುನ್ನತ ಚಾರಿತ್ರಿಕ ಕೃತಿಯಾದ ಏಷ್ಯ ಗ್ರಂಥವನ್ನು ಡೀಯೋಗೊಂಡು ಕೋಟೊ ಮುಂದುವರಿಸಿ ಮುಕ್ತಾಯಗೊಳಿಸಿದ. ಎರಾಸ್ಮಸ್ ವಿದ್ವಾಂಸನ ಮಿತ್ರನೂ ರಾಜಕಾರಣಿ ಮತ್ತು ಪರ್ಯಟನ ಶೀಲನಾದ ಡಾಮೀಯವೊ ದೆ ಗೊಯಸ್ ಎಂಬಾತ ಮಾನ್ವೆಲ್ ದೊರೆಯ ಇತಿಹಾಸವನ್ನೂ ಗೋವಾದಲ್ಲಿ ಇಪ್ಪತ್ತು ವರ್ಷ ಜೀವಿಸಿದ್ದ ಫರ್‍ನ್ಯಾವೊ ಲೋಪೆತ್ ದೆ ಕಾಸ್ಟಾನ್ಯೇಡ ಒಂದು ಇಂಡಿಯ ಚರಿತ್ರೆಯನ್ನೂ ಇಂಡಿಯದ ನಡೆನುಡಿ ಮತ್ತು ಆಚಾರಗಳನ್ನು ಪರಿಶೀಲಿಸಿದ ಗಾಸ್ಪಾರ್ ಕೂಶ್ರೀಯನು ಇಂಡಿಯದ ಚರಿತ್ರೆಯೊಂದನ್ನೂ ಫ್ರೇಯ್ ಗಾಸ್ಪಾರ್ ದ ಕ್ರೂತ್ ಎಂಬಾತ ಪೌರ್ವಾತ್ಯ ಪ್ರಯಾಣಗಳ ವರ್ಣನೆಯನ್ನೂ ಬರೆದರು. 

17ನೆಯ ಶತಮಾನ : 1581-1640ರ ವರೆಗಿನ ಸ್ಪ್ಯಾನಿಷರ ಆಳ್ವಿಕೆಯಲ್ಲಿ ಪೋರ್ಚುಗೀಸ್ ಭಾಷೆ ಮತ್ತು ಸಾಹಿತ್ಯಕ್ಕೆ ದೊಡ್ಡ ಧಕ್ಕೆ ಸಂಭವಿಸಿತು. 1536ರಲ್ಲಿ ಆಗಲೆ ಇನ್‍ಕ್ವಿಸಿಷನ್ ಪುಸ್ತಕಗಳ ಮೇಲೂ 1552ರಲ್ಲಿ ಉಚ್ಚ ವಿದ್ಯಾಭ್ಯಾಸದ ಮೇಲೂ ಹತೋಟಿಯನ್ನು ಜಾರಿ ಮಾಡಲಾಗಿತ್ತು. ಅನೇಕ ಲೇಖಕರು ಸ್ಪ್ಯಾನಿಷ್‍ನಲ್ಲೇ ಬರೆಯತೊಡಗಿದರು. ಈ ಶತಮಾನದ ಪೋರ್ಚುಗೀಸ್ ಭಾಷೆಯ ಒಂದು ಸೊಗಸಾದ ಕೃತಿಯೆಂದರೆ ಪೋರ್ಚುಗೀಸ್ ಸನ್ಯಾಸಿನಿಯ ಪತ್ರಗಳು ಎಂದು ಪ್ರಸಿದ್ಧವಾಗಿರುವ ಮರೀಯಾನಾಳ ಐದು ಪತ್ರಗಳು. ಈ ಶತಮಾನದ ಸಾಹಿತ್ಯ ಕ್ಷೇತ್ರದ ಪ್ರಮುಖ ವ್ಯಕ್ತಿ ಫ್ರಾನ್ಸಿಸ್ಕೋ ಮಾನ್ವೆಲ್ ಡೆಮೆಲೊ. 
18ನೆಯ ಶತಮಾನ : ಪ್ರಗತಿಪರ ವಿದ್ವಾಂಸರು ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳನ್ನು ಸಂದರ್ಶಿಸಿ ಬಂದು ಪೋರ್ಚುಗೀಸ್ ಸಾಹಿತ್ಯದ ಪ್ರತಿ ಶಾಖೆಯಲ್ಲೂ ಸುಧಾರಣೆಗೆ ಕರೆ ಕೊಟ್ಟರು. 1720ರಲ್ಲಿ ವಿದ್ವಾಂಸರುಗಳು ಸೇರಿ ಚಾರಿತ್ರಿಕ ಸಮಾಜವೊಂದನ್ನು ಸ್ಥಾಪಿಸಿಕೊಂಡು 15 ಸಂಪುಟಗಳ ಮೆಮೋರಿಯಾಸ್ ಎಂಬ ಚಾರಿತ್ರಿಕ ಗ್ರಂಥವನ್ನು ಪ್ರಕಟಿಸಿದರು. ಕಾಯೆಟೊನೊ ದೆ ನೌಸ ಎಂಬಾತ ಪೋರ್ಚುಗೀಸ್ ರಾಜಮನೆತನದ ಚರಿತ್ರೆ ಎಂಬ ಉದ್ಗ್ರಂಥವನ್ನೂ ಬಾರ್ಬರೋಸಾ ನೆಚಾಡೊ ಎಂಬಾತ ಬಿಬ್ಲಿಯೊತೇಕ ಲೂಸಿಟಾನ ಗ್ರಂಥವನ್ನೂ ಬರೆದರು. 1780ರಲ್ಲಿ ಸ್ಥಾಪಿತವಾದ ವೈಜ್ಞಾನಿಕ ವಿದ್ವನ್ಮಂಡಳಿಯು ಪೋರ್ಚುಗೀಸ್ ನಿಘಂಟನ್ನು ಪ್ರಕಟಿಸಿತು. ಮಾನ್ವೆಲ್ ಮರೀಯ ವಾರ್ವುಸಾ ವುಕ್ಯಾಜೆ (1765-1805) ಮುಂತಾದವರು ಲ್ಯಾಟಿನ್, ಗ್ರೀಕ್ ಮತ್ತು ಫ್ರೆಂಚ್ ಸಾಹಿತ್ಯಗಳ ಆದರ್ಶವನ್ನು ಮುಂದಿಟ್ಟುಕೊಂಡು ನ್ಯೂ ಆರ್ಕೇಡಿಯ ಎಂಬ ಸಮಾಜವನ್ನು ಸ್ಥಾಪಿಸಿಕೊಂಡರು. ವುಕ್ಯಾಜೆ ಅದೇ ಪ್ರೇರಣೆಯಲ್ಲಿ ಎಕ್ಲಾಗ್‍ಗಳನ್ನೂ ಚತುರ್ದಶ ಪದಿಗಳನ್ನೂ ಬರೆದ. ಫ್ರಾನ್ಸಿಸ್ಕೋ ಮಾನ್ವೆಲ್ ಡು ನಸ್ಕಿಮೇಂಟೊ (1734-1819) ಹಳೆಯ ಇಟಾಲಿಯನ್ ಪಂಥದ ಶೈಲಿಯನ್ನೇ ಮುಂದುವರಿಸಿ ರೋಮ್ಯಾಂಟಿಕ್ ಯುಗದ ಕಾವ್ಯಕ್ಕೆ ತಳಹದಿ ಹಾಕಿಕೊಟ್ಟ. ಈತನ ಕೃತಿಗಳಲ್ಲಿ ನೆಫ್ಚೂನ್ ದೇವತೆ, ಪೋರ್ಚುಗೀಸರನ್ನು ಕುರಿತು ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನು ಕುರಿತು ಎಂಬ ದೇಶಭಕ್ತಿ ಮತ್ತು ಸ್ವಾತಂತ್ರ್ಯ ಪ್ರೇಮವನ್ನು ಸಾರುವ ಪ್ರಗಾಥಗಳು ಪ್ರಸಿದ್ಧವಾಗಿವೆ.

19ನೆಯ ಶತಮಾನ ಮತ್ತು ಮುಂದಕ್ಕೆ : 19ನೆಯ ಶತಮಾನದಲ್ಲಿ ಪದ್ಯಸಾಹಿತ್ಯ : ಯೂರೋಪಿನಲ್ಲೆಲ್ಲ ಹರಡಿದ ರೊಮ್ಯಾಂಟಿಕ್ ಮನೋಧರ್ಮ ಪೋರ್ಚುಗೀಸ್ ಭಾಷೆಯಲ್ಲಿ ಗಾರ್ರೆಟ್ ಮತ್ತು ಏರ್ಕೂಲಾನೂ ದೆ ಕರ್ವಾಲ್ಯೂ ಅರವೂಜೂ ಕವಿಗಳ ಕೃತಿಗಳಲ್ಲಿ ಮೂಡಿಬಂದಿತು. 1865ರಲ್ಲಿ ಇದಕ್ಕೆ ವಿರುದ್ಧವಾದ ಒಂದು ಪಂಥ ಹುಟ್ಟಿತು. ಅದರ ಮುಖ್ಯ ವ್ಯಕ್ತಿಗಳು ಟೀಯೊಫೀಲೊ ಬ್ರಾಗಾ ಮತ್ತು ಆಂಟೇರೊ ದೆ ಕೆಂಟಾಲ್, ಕೆಂಟಾಲನ ಚತುರ್ದಶಪದಿ ಮಾಲೆಯಲ್ಲಿ ಅಭಿನವ ಬೌದ್ಧತತ್ತ್ವಗಳೂ, ನಿರಾಶಾವಾದವೂ ಎದ್ದು ಕಾಣುವವು. ಓಡ್ಸ್ ಮೆಡೆರ್ಯಾಸ್ ಅಥವಾ ಆಧುನಿಕ ಪ್ರಗಾಥಗಳಲ್ಲಿ ಕ್ರಾಂತಿಕಾರೀ ಸ್ವತಂತ್ರ ಆಲೋಚನೆ ಎದ್ದು ಕಾಣುವುದು. ಈತ ಬರೆದ ಪೋರ್ಚುಗೀಸ್ ಸಾಹಿತ್ಯ ಚರಿತ್ರೆ ಮತ್ತು ವಿಮರ್ಶೆಯ ಲೇಖನಗಳು ಮುಂದಿನ ಪೀಳಿಗೆಗೆ ಪ್ರೇರಕ ಶಕ್ತಿಯಾದವು. ಬ್ರಾಗಾ ಕವಿ ಕೋಂಟನ ಅನುಯಾಯಿ; ರೆವಿಸಾವೋ ಡೊ ಟೆಂಪೊಸ್ ಎಂಬ ಭವ್ಯ ಕಾವ್ಯವನ್ನೂ ಇತರ ಕವನಗಳನ್ನೂ ಬರೆದಿದ್ದಾನೆ. ಅನಂತರ ಬಂದ ಗೋಮಸ್ ಲೇಯಾಲ್ ಕ್ರೈಸ್ತ ಮತವನ್ನು ವಿರೋಧಿಸಿದ. ಆಂಟೋನಿಯೊ ಎರ್ರೆರದೆ ಓಲಿವೇಯ್ರ ದೇಶೀಯ ಮತ್ತು ಕ್ರೈಸ್ತ ಮತೀಯ ಪ್ರೇರಣೆಯಲ್ಲಿ ಬರೆದ. ಯುಜೇನ್ಯೊದೆ ಕಾಸ್ಟ್ರೊ (1869-1944) ಫ್ರೆಂಚ್ ಸಾಂಕೇತಿಕ ಕವಿಗಳ ಪ್ರಭಾವದಲ್ಲಿ ಬರೆದ. ಈ ಕಾಲದ ನಾಟಕ ಸಾಹಿತ್ಯದಲ್ಲಿ ಗ್ಯಾರೆಟ್ ದೇಶೀಯ ಚರಿತ್ರೆಯನ್ನೊಳಗೊಂಡ ನಾಟಕಗಳನ್ನು ಆಂಟೋನಿಯೊ ಎನ್ನೇಸ್ ಸಮಕಾಲೀನ ಪ್ರಶ್ನೆಗಳನ್ನೊಳಗೊಂಡ ನಾಟಕಗಳನ್ನು ಬರೆದರು. ಗದ್ಯ ಮತ್ತು ಕಾದಂಬರಿ ಕ್ಷೇತ್ರದಲ್ಲಿ ಸರ್ ವಾಲ್ಟರ್ ಸ್ಕಾಟ್‍ನ ಮಾದರಿಯಲ್ಲಿ ಏರ್ಕೂಲಾನೂ ಬರೆದ ಚಾರಿತ್ರಿಕ ಕಾದಂಬರಿಗಳು ಮಿಕ್ಕವರಿಗೆ ದಾರಿದೀಪವಾದವು. ಕಾಮೀಲ್ಯೂ ಕಾಸ್ಟೇಲ್ಯೂ ಬ್ರಾಂಶೂ 19ನೆಯ ಶತಮಾನದ ಸಾಮಾಜಿಕ ಮತ್ತು ಗೃಹಜೀವನವನ್ನು ಚಿತ್ರಿಸಿದ್ದಾನೆ. ಜ್ಯೂಲಿಯೋ ಡಿನಿಸ್ ಎಂದು ಪ್ರಖ್ಯಾತನಾಗಿರುವ ಗೋಮೆಸ್ ಕೋಯಲ್ಲೂ ಡಿಕನ್ಸನ್ನು ಅನುಸರಿಸಿ ಗ್ರಾಮಾಂತರ ಜೀವನವನ್ನು ಚಿತ್ರಿಸಿದ್ದಾನೆ. ಏಷಡೂಕೇಯ್ರೋಜ್ (1845-1900) ನಿಷ್ಠೂರ ವಾಸ್ತವವಾದಿ. ಈತನ ಸಿನ್ ಆಫ್ ಫಾದರ್ ಅಮಾರೊ (ಅಮಾರೊ ಪಾದ್ರಿಯ ದುಷ್ಕøತ್ಯ) (1871) ಪೋರ್ಚುಗಲ್‍ನಲ್ಲಿ ವಾಸ್ತವವಾದಿ ಪಂಥಕ್ಕೆ ಅಡಿಪಾಯವಾಯಿತು. ಮಾನ್ವೆಲ್ ರೀವೇಯ್ರೋನ ತ್ರಿಕಾಂಡ ಕಾದಂಬರಿ ಏಕೆತಡ್ರಲ್, ಒಡಿಸೆರ್ಟೊ, ಎರೆಸೆರೆಯಿಗೋ ಕ್ರೈಸ್ತ ಪಾದ್ರಿಗಳ ಪರವಾದ ಗ್ರಂಥ. ಈ ಶತಮಾನದ ಉತ್ತಮ ಚರಿತ್ರಕಾರ ಏರ್ಕೂಲಾನೂ. 

ಇಪ್ಪತ್ತನೆಯ ಶತಮಾನದ ಮೊದಲ ಮೂರು-ನಾಲ್ಕು ದಶಕಗಳಲ್ಲಿ ಪೋರ್ಚುಗೀಸ್ ಸಾಹಿತ್ಯ ಅಷ್ಟೇನೂ ಉಜ್ವಲವಾದುದಾಗಿಲ್ಲ.								(ಎಂ.ಕೆ.ಬಿ.; ಕೆ.ಆರ್.ಜಿ.)

	ಹದಿಮೂರನೆಯ ಶತಮಾನ ತ್ಯೂಬೆದೊರ್ ಗಾಯಕರ ಕಾಲ. ಅರಸ ಮೂರನೆಯ ಅಘೋನ್ಸೊನ ಮಗ ಅರಸ ಡಿನಿeóï ಸ್ವತಃ ಒಳ್ಳೆಯ ತ್ಯೂಬೆದೊರ್, ತ್ಯೂಬೆದೊರ್ ಕವಿಗಳ ರಚನೆಗಳು ಮೂರು ಬಗೆಯವು: ಬೇಡಿಕೊಳ್ಳುವ ಪ್ರೇಮಗೀತೆಗಳು, ಪ್ರೇಯಸಿಯ ಮನ ಒಲಿಸುವ ಪ್ರಿಯನ ಗೀತೆಗಳು ಮತ್ತು ಲೇವಡಿ ಮಾಡುವ ಗೀತೆಗಳು. ಈ ಗಾಯಕರ 2000ಕ್ಕಿಂತ ಹೆಚ್ಚು ರಚನೆಗಳು ಉಳಿದುಬಂದಿವೆ. ಇವುಗಳ ಜೊತೆಗೆ ಹತ್ತನೆಯ ಅಲ್‍ಫೊನ್ಸ್ ರಚಿಸಿದ ವರ್ಜಿನ್ ಮೇರಿಯ ಸ್ತುತಿ ಗೀತೆಗಳು ಉಳಿದಿವೆ.

	15ನೆಯ ಶತಮಾನದ ಕಡೆಯ ದಶಕಗಳಲ್ಲಿ ಪೋರ್ಚುಗಲ್ಲಿನಲ್ಲಿ ಸಾಂಸ್ಕøತಿಕ ನವಜೀವನ ಮೂಡಿತು. ಮನುಷ್ಯ ಸ್ವಭಾವದಲ್ಲಿ ಆಸಕ್ತಿ ಮೂಡಿ, ಲೌಕಿಕ ಸಾಹಿತ್ಯ ಪ್ರಾರಂಭವಾಯಿತು. ಗಾಸಿಯ ಡಿ ಕೆಸೆಂಡೆ ಸಂಕಲಿಸಿದ `ಜನರಲ್ ಸಾಂಗ್‍ಬುಕ್ (1516)ನಲ್ಲಿ ಹೊಸ ಪ್ರಾರಂಭದ ಉತ್ಸಾಹ ಮತ್ತು ಆತ್ಮ ವಿಶ್ವಾಸ ಪ್ರಕಟವಾಗುತ್ತವೆ. ಇವರಲ್ಲಿ ಅತ್ಯಂತ ಶ್ರೇಷ್ಠ ಕವಿ ಜಿಲ್ ವಿರ್ಸಾಂಟ್. ಇವನು ತನ್ನ ಕವನಗಳಲ್ಲಿ ಒಂದು ಪ್ರಪಂಚವನ್ನೆ ಸೃಷ್ಟಿಸಿ ಬಿಡುತ್ತಾನೆ. ಕಪ್ಪು ಗುಲಾಮರಿಂದ ಉನ್ನತ ಧರ್ಮಾಧಿಕಾರಿಗಳು ಮತ್ತು ರಾಜ ಮನೆತನದವರೆಗೆ ಇಡೀ ಪೋರ್ಚುಗೀಸ್ ಸಮಾಜವನ್ನೆ ಪುನರ್ ಸೃಷ್ಟಿ ಮಾಡುತ್ತಾನೆ.

	16ನೇ ಶತಮಾನದಲ್ಲಿ ನಾಟಕಕ್ಕೆ ಹೊಸ ಕಳೆ ಮೂಡಿತು. ಆ್ಯಂತೋನಿಯೊ ಫೆರೇರ ಗ್ರೀಕ್ ನಾಟಕಗಳನ್ನನ್ನುಸರಿಸಿ `ಇಗ್ನೆeóï ಡ ಕ್ಯಾಸ್ಟೊ ಎನ್ನುವ ಟ್ರ್ಯಾಜೆಡಿಯನ್ನು ಬರೆದ ಜಾರ್ಜ್ ಫೆರೇರ ಡ ವಸ್ಕಾನ್ ಸಿಲಸ್ ಹಲವು ನಾಟಕಗಳನ್ನು `ಕಾಮಿಡಿ ಆಫ್ ಮಾನರ್ಸ್ ಬಗೆಯಲ್ಲಿ ಬರೆದ.

	ಲೂಸಿಯೆಡ್ಸ್ ಬರೆದ ಕಾಮೋಯನ್ಸ್‍ನೇ ಶ್ರೇಷ್ಠ ಭಾವಗೀತೆಗಳ ಕವಿಯೂ ಆಗಿದ್ದ. ಬಹು ಮಧುರವಾದ ಭಾಷೆಯಲ್ಲಿ ಇವನು ಆದರ್ಶಪ್ರೇಮ ಮತ್ತು ಮನುಷ್ಯ ಜೀವನದ ಅಸಂಬದ್ಧತೆಗಳನ್ನು ಕುರಿತು ಬರೆದ. ಹಲವು ಶತಮಾನಗಳ ಕಾಲ ಇವನು ಪೋರ್ಚುಗೀಸ್ ಬರಹಗಾರರಿಗೆ ಸ್ಫೂರ್ತಿಯ ನೆಲೆಯಾಗಿದ್ದ.

	ಅಲ್ಮೆಡ ಗಾರ್ರೆಟ್ ಚಾರಿತ್ರಿಕ ನಾಟಕಗಳನ್ನು ಬರೆದು ತನ್ನ ನಾಡಿನ ರಂಗಭೂಮಿಗೆ ಮತ್ತ ಚೈತನ್ಯ ನೀಡಿದ. ಹಕ್ರ್ಯುಲಾನೊ ಚಾರಿತ್ರಿಕ ಕಾದಂಬರಿಗಳನ್ನು ಬರೆದ.

	ಇಪ್ಪತ್ತನೆಯ ಶತಮಾನದಲ್ಲಿ ಕಾದಂಬರಿ ಸಾಹಿತ್ಯವು ಒಳ್ಳೆಯ ಬೆಳೆಯನ್ನು ಕಂಡಿತು. ಮಗ್ಗು ಎಲೆ ಟೋರ್ಗ `ಡೈರಿ ಎನ್ನುವ ಕೃತಿಯಲ್ಲಿ ಗದ್ಯ, ಪದ್ಯಗಳೆರಡನ್ನು ಬಳಸಿ ಸಮಕಾಲೀನ ಆಗು ಹೋಗುಗಳನ್ನು ವಿಶ್ಲೇಷಿಸಿದ. ಐರೀನ್ ಅಸ್‍ಬೊಗಿ ಬರೆದ ಕಥೆಗಳಲ್ಲಿ ಮೂಲೆಯಲ್ಲಿ ಹುಟ್ಟಿ ಬದುಕಿ ಸಾಯುವವರ ಬದುಕನ್ನು ಸಹಾನುಭೂತಿಯಿಂದ ನಿರೂಪಿಸಿದೆ. ಫರೇರ ಡ ಕ್ಯಾಸ್ಟ್ರೊನ `ದಿ ಜಂಗಲ್ ಕಾದಂಬರಿ ತನ್ನ ದೇಶವನ್ನು ಬಿಟ್ಟು ಬ್ರೆಜಿಲ್‍ಗೆ ಹೋದ ವಲಸೆಗಾರನ ಕಥೆಯನ್ನು ಹೇಳುತ್ತದೆ.

	ಇನ್ನೊಂದು ಗುಂಪು ಸಾಮಾಜಿಕ ವಾಸ್ತವತೆಯಲ್ಲಿ ಒಲವನ್ನು ತೋರಿಸಿತು. `ಅಲ್ಪಕಾಲದ ಸಂತೋಷ (1965) ಕಾದಂಬರಿಯನ್ನು ಬರೆದ ವರ್ಜಿಲಿಯೊ ಫರೇರ ಮತ್ತು `ಜೋಬ್‍ನ ಅತಿಥಿ ಕಾದಂಬರಿಯನ್ನು ಬರೆದ ಜೋಸೆ ಕಾರ್ಡೋಸೊ ಪೈರೆಸ್ ಈ ಗುಂಪಿನವರು.

	ಪೋರ್ಚುಗೀಸ್ ಕವಿಗಳು ಸರ್ರಿಯಲಿಸ್ಟ್ ವಿಧಾನವನ್ನು ಬಳಸಿದ್ದಾರೆ. 20ನೆಯ ಶತಮಾನದಲ್ಲಿ ಮಹಿಳೆಯರೂ ಗಮನಾರ್ಹ ಪ್ರಮಾಣದಲ್ಲಿ ಸಾಹಿತ್ಯ ರಚನೆ ಮಾಡಿದರು. ಅಗಸ್ಟಿನ ಬೆಸ್ಸ ಲೂಯಿಸ್, ಮರೈಯ ಇಸಬೆಲ್ ಬರೆನೊ, ಮರೈಯ ತೆರೆಸ ಹಾರ್ತ ಮತ್ತು ಮರೈಯ ವಲ್ಹೊಡ ಕಾಸ್ಡ ಇವರಲ್ಲಿ ಮುಖ್ಯರು. 1980ರ ದಶಕದಲ್ಲಿ ರಾಜಕೀಯ ವಸ್ತುಗಳಿಗೆ ಪ್ರಾಮುಖ್ಯತೆ ದೊರಕಿತು. 1998ರಲ್ಲಿ ಸರಮಾಗೊಗೆ ನೊಬೆಲ್ ಪ್ರಶಸ್ತಿ ಬಂದಿತು.
(ನೋಡಿ- ಸ್ಪ್ಯಾನಿಷ್-ಸಾಹಿತ್ಯ)
									(ಪರಿಷ್ಕರಣೆ: ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ